ನಿದರ್ಶನ.! (ಕವನ)

“ಇದು ಹಣತೆಯ ಬೆಳಕು-ಬದುಕಿನ ಮಾರ್ಮಿಕ ಕವಿತೆ. ಬೆಳಕಿನ ಸತ್ವ-ತತ್ವಗಳ ನಿರೂಪಿಸುವ ಭಾವಪ್ರಣತೆ. ಇಲ್ಲಿ ಆಳಕ್ಕಿಳಿದಷ್ಟೂ ಬೆಳಗುವ ಸಿದ್ದಾಂತದ ಸಾರವಿದೆ. ಅರ್ಥೈಸಿದಷ್ಟೂ ಬೆಳಕಿನ ವೇದಾಂತದ ವಿಸ್ತಾರವಿದೆ. ಪುಟ್ಟದೊಂದು ಹಣತೆಯಲ್ಲಿ ಎಷ್ಟೆಲ್ಲಾ ಬಾಳಭಾಷ್ಯಗಳ ದಿಗ್ದರ್ಶನವಿದೆ. ಎಷ್ಟೆಷ್ಟೆಲ್ಲಾ ನಿತ್ಯ ಸತ್ಯ ನಿದರ್ಶನಗಳಿವೆ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ನಿದರ್ಶನ.!

ತೈಲವ ಹೀರುತ್ತಾ..
ತಾನೂ ಉರಿಯುತ್ತಾ..
ಬೆಳಕಾಗುವುದು ಬತ್ತಿ.!

ಬತ್ತಿಯನು ತಣಿಸುತ್ತಾ..
ತಾನೂ ಕರಗುತ್ತಾ..
ಜ್ಯೋತಿಯಾಗುವುದು ತೈಲ.!

ಬತ್ತಿ-ತೈಲಗಳ ಪರಸ್ಪರ
ಅರ್ಪಣಾ ಸಮೀಕರಣವೇ
ಜ್ಯೋತಿಯ ಬೆಳಕು.!

ನಿಸ್ವಾರ್ಥ ತ್ಯಾಗಗಳ
ಸತ್ಯ ಸಾಕ್ಷೀಕರಣವೇ
ಬೆಳಕಿನ ಬದುಕು..!!

ತೈಲ-ಬತ್ತಿಗಳ ಸತತ
ದಿವ್ಯ ಬಲಿದಾನದಿಂದಲೇ
ಅಂಧಕಾರದ ದಮನ.!

ಬತ್ತಿ-ತೈಲಗಳ ನಿರತ
ಆತ್ಮಾನುಸಂಧಾನದಿಂದಲೇ
ಭವ್ಯ ಬೆಳಕಯಾನ.!

ಹಣತೆಯಿದು ಸಾವಿರದ
ಸಾವಿರ ತತ್ವಗಳ ಪ್ರದರ್ಶನ
ಬೆಳಕು ಬದುಕಿನ ನಿದರ್ಶನ.!

ಎ.ಎನ್.ರಮೇಶ್. ಗುಬ್ಬಿ.

Leave a Reply

Your email address will not be published. Required fields are marked *