“ಹೆಚ್ಚೆನೂ ಹೇಳಲಾರೆ.. ಪೀಠಿಕೆಯೂ ಇಲ್ಲ, ಪಾಠಿಕೆಯೂ ಇಲ್ಲ. ಇದು ಒಲವಿನ ನೇತ್ರಗಳಿಂದ ಅರ್ಥೈಸಿದರೆ ಒಲಿದ ಜೀವದ ಅನುರಾಗದ ಗೀತೆ. ಆಧ್ಯಾತ್ಮದ ಅಕ್ಷಿಗಳಿಂದ ಅನುಭಾವಿಸಿದರೆ ಅದೃಶ್ಯದೈವದ ಆರಾಧನಾ ಸಂಕೀರ್ತನೆ. ಇದು ನಿಮ್ಮ ನಿಮ್ಮ ಭಾವಕ್ಕೆ, ನಿಮ್ಮ ನಿಮ್ಮ ಭಕುತಿಗೆ ಒಪ್ಪುವ ಅಪ್ಪುವ ಕವಿತೆ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ನೀನು..!
ಈಸ್ವರತಂತಿಗಳ ನಾದ ನೀನೆ
ಜೀವತಂತುಗಳ ಸ್ವಾದ ನೀನೆ
ಅಧರಗಳ ಮೋದವು ನೀನೆ
ಆಂತರ್ಯ ವೇದವೂ ನೀನೆ
ಕಂಗಳ ಬೆಳಕಿನ ದೀಪ ನೀನೆ
ಕರುಳ ತೇಜೋರೂಪ ನೀನೆ
ಭಾವಭಾಷ್ಯದ ಸ್ವರೂಪ ನೀನೆ
ಬಾಳಬಂಧದ ನಿರೂಪ ನೀನೆ
ಪ್ರತಿಕಣದ ಝೇಂಕಾರ ನೀನೆ
ಪ್ರತಿಕ್ಷಣದ ಸಾಕಾರವೂ ನೀನೆ
ಶಾಂತಿಪ್ರೇಮ ಓಂಕಾರ ನೀನೆ
ಪ್ರೀತಿನೇಮ ಸಾಕ್ಷಾತ್ಕಾರ ನೀನೆ
ಎ.ಎನ್.ರಮೇಶ್.ಗುಬ್ಬಿ